0:00
0:00

ಅಧ್ಯಾಯ 50

ಬಲಿಷ್ಠ ದೇವರಾಗಿರುವ ಕರ್ತನು ತಾನೇ ಮಾತನಾಡಿ ಸೂರ್ಯೋದಯದಿಂದ ಅಸ್ತಮಾನದ ವರೆಗೂ ಭೂನಿವಾಸಿಗಳನ್ನು ಕರೆದಿದ್ದಾನೆ.
2 ಸೌಂದರ್ಯದ ಪರಿಪೂರ್ಣತೆಯಾದ ಚೀಯೋನಿ ನಿಂದ ದೇವರು ಪ್ರಕಾಶಿಸಿದ್ದಾನೆ.
3 ನಮ್ಮ ದೇವರು ಬರುತ್ತಾನೆ, ಮೌನವಾಗಿರನು; ಬೆಂಕಿಯು ಆತನ ಮುಂದೆ ದಹಿಸುವದು; ಅದು ಆತನ ಸುತ್ತಲು ದೊಡ್ಡ ಬಿರುಗಾಳಿಯಂತಿರುವದು.
4 ತನ್ನ ಜನರಿಗೆ ನ್ಯಾಯ ತೀರಿಸುವದಕ್ಕೆ ಮೇಲಿನಿಂದ ಆಕಾಶಗಳನ್ನೂ ಭೂಮಿ ಯನ್ನೂ ಕರೆಯುತ್ತಾನೆ.
5 ಯಜ್ಞದಿಂದ ನನ್ನ ಸಂಗಡ ಒಡಂಬಡಿಕೆ ಮಾಡಿದ ನನ್ನ ಪರಿಶುದ್ಧರನ್ನು ನನ್ನ ಬಳಿಗೆ ಒಟ್ಟುಗೂಡಿಸಿರಿ.
6 ಆಕಾಶಗಳು ಆತನ ನೀತಿ ಯನ್ನು ಪ್ರಕಟಿಸುತ್ತವೆ; ದೇವರು ತಾನೇ ನ್ಯಾಯಾಧಿ ಪತಿಯಾಗಿದ್ದಾನೆ. ಸೆಲಾ.
7 ಓ ನನ್ನ ಜನರೇ, ಕೇಳಿರಿ, ನಾನು ನುಡಿಯುವೆನು; ಓ ಇಸ್ರಾಯೇಲೇ, ನಿನಗೆ ವಿರೋಧವಾಗಿ ನಾನು ಸಾಕ್ಷಿಕೊಡುವೆನು; ನಾನು ದೇವರು, ಹೌದು ನಿನ್ನ ದೇವರು ನಾನೇ.
8 ನಿನ್ನ ಬಲಿಗಳಿಗೋಸ್ಕರ ಇಲ್ಲವೆ ನಿನ್ನ ದಹನಬಲಿಗೋಸ್ಕರ ನಾನು ನಿನ್ನನ್ನು ಗದರಿಸುವ ದಿಲ್ಲ; ಅವು ಯಾವಾಗಲೂ ನನ್ನ ಮುಂದೆ ಇವೆ.
9 ನಿನ್ನ ಮನೆಯಿಂದ ಹೋರಿಯನ್ನೂ ಇಲ್ಲವೆ ನಿನ್ನ ದೊಡ್ಡಿಗಳಿಂದ ಹೋತಗಳನ್ನೂ ತೆಗೆದುಕೊಳ್ಳೆನು.
10 ಅಡವಿಯ ಮೃಗಗಳೆಲ್ಲವೂ ಬೆಟ್ಟಗಳಲ್ಲಿರುವ ಸಾವಿರ ಪಶುಗಳೂ ನನ್ನವೇ.
11 ಬೆಟ್ಟಗಳ ಪಕ್ಷಿಗಳನ್ನೆಲ್ಲಾ ನಾನು ಬಲ್ಲೆನು; ಕಾಡುಮೃಗಗಳು ನನ್ನವುಗಳಾಗಿವೆ.
12 ನಾನು ಹಸಿದಿದ್ದರೆ ನಿನಗೆ ಹೇಳೆನು; ಭೂಲೋಕವೂ ಅದರ ಪರಿಪೂರ್ಣತೆಯೂ ನನ್ನವೇ.
13 ಹೋರಿಗಳ ಮಾಂಸವನ್ನು ತಿನ್ನುವೆನೋ ಇಲ್ಲವೆ ಹೋತಗಳ ರಕ್ತವನ್ನು ಕುಡಿಯುವೆನೋ?
14 ದೇವರಿಗೆ ಸ್ತೋತ್ರವನ್ನು (ಬಲಿ ಯಾಗಿ) ಅರ್ಪಿಸು; ಮಹೋನ್ನತನಿಗೆ ನಿನ್ನ ಪ್ರಮಾಣ ಗಳನ್ನು ಸಲ್ಲಿಸು.
15 ಇಕ್ಕಟ್ಟಿನ ದಿವಸದಲ್ಲಿ ನನ್ನನ್ನು ಕರೆ; ನಾನು ನಿನ್ನನ್ನು ತಪ್ಪಿಸಿಬಿಡುವೆನು; ಆಗ ನನ್ನನ್ನು ಘನಪಡಿಸುವಿ.
16 ಆದರೆ ದುಷ್ಟನಿಗೆ ದೇವರು ಹೇಳುವದೇನಂದರೆ --ನನ್ನ ನಿಯಮಗಳನ್ನು ಪ್ರಕಟಿಸುವದು ನಿನಗೇನು? ಇಲ್ಲವೆ ನನ್ನ ಒಡಂಬಡಿಕೆಯನ್ನು ನಿನ್ನ ಬಾಯಲ್ಲಿ ಉಚ್ಚರಿಸುವದೇಕೆ?
17 ನೀನು ಶಿಕ್ಷಣವನ್ನು ಹಗೆಮಾಡಿ ನನ್ನ ವಾಕ್ಯಗಳನ್ನು ನಿನ್ನ ಹಿಂದೆ ಹಾಕುತ್ತೀಯಲ್ಲಾ.
18 ಕಳ್ಳನನ್ನು ನೋಡಿದರೆ ಅವನೊಂದಿಗೆ ಒಪ್ಪುತ್ತೀ; ಜಾರರ ಸಂಗಡ ನಿನ್ನ ಪಾಲು ಇದೆ.
19 ನೀನು ನಿನ್ನ ಬಾಯನ್ನು ಕೇಡಿಗೆ ಒಪ್ಪಿಸುತ್ತೀ; ನಿನ್ನ ನಾಲಿಗೆಯು ಮೋಸವನ್ನು ಜೋಡಿಸುತ್ತದೆ.
20 ನೀನು ಕೂತು ಕೊಂಡು ನಿನ್ನ ಸಹೋದರನಿಗೆ ವಿರೋಧವಾಗಿ ನುಡಿ ಯುತ್ತೀ; ನಿನ್ನ ಸ್ವಂತ ಒಡಹುಟ್ಟಿದವನ ಮೇಲೆ ಚಾಡಿ ಹೇಳುತ್ತೀ.
21 ಇವುಗಳನ್ನು ನೀನು ಮಾಡಿದಾಗ್ಯೂ ನಾನು ಮೌನವಾಗಿದ್ದೆನು; ಆದದರಿಂದ ನಾನೂ ಸಹ ನಿನ್ನ ಹಾಗೆ ಒಬ್ಬನೆಂದು ನೀನು ನೆನಸಿದಿ; ಆದರೆ ನಾನು ನಿನ್ನನ್ನು ಗದರಿಸಿ ನಿನ್ನ ಕಣ್ಣುಗಳ ಮುಂದೆ ಈ ಕೃತ್ಯಗಳನ್ನು ಕ್ರಮವಾಗಿಡುವೆನು.
22 ದೇವರನ್ನು ಮರೆತು ಬಿಡುವವರೇ, ನಾನು ನಿಮ್ಮನ್ನು ಹರಿದು ಚೂರುಮಾಡ ದಂತೆ ನನ್ನ ಕೈಯಿಂದ ನಿಮ್ಮನ್ನು ಬಿಡಿಸುವವರು ಯಾರೂ ಇರುವದಿಲ್ಲವೆಂಬದನ್ನು ಗ್ರಹಿಸಿಕೊಳ್ಳಿರಿ.
23 ಸ್ತೊತ್ರವನ್ನು ಅರ್ಪಿಸುವವನು ನನ್ನನ್ನು ಘನ ಪಡಿಸುತ್ತಾನೆ; ತನ್ನ ನಡವಳಿಕೆಯನ್ನು ಕ್ರಮಪಡಿಸಿ ಕೊಳ್ಳುವವನಿಗೆ ದೇವರ ರಕ್ಷಣೆಯನ್ನು ನಾನು ತೋರಿಸುವೆನು.